ಮಾನಸಿಂಹ		
ತೋಮರ ವಂಶಕ್ಕೆ ಸೇರಿದ ಅರಸ. ಗ್ವಾಲಿಯರ್‍ನಿಂದ ರಾಜ್ಯ ಆಳಿದ (1486-1517). ಈತ ಬದುಕಿರುವ ತನಕ ಗ್ವಾಲಿಯರ್ ಮೇಲೆ ಕಣ್ಣಿಟ್ಟಿದ್ದ ಔನಪುರ ಮತ್ತು ಮಾಳವಗಳ ಮುಸ್ಲಿಮ್ ಅರಸರ, ಹಾಗೆಯೇ ದೆಹಲಿಯ ಸುಲ್ತಾನರ ಪ್ರಯತ್ನಗಳು ಸಫಲವಾಗಲಿಲ್ಲ. ಈತ ಒಬ್ಬ ಮಹಾಯೋಧನಾಗಿದ್ದಂತೆ ಕಲಾಪೋಷಕನೂ ಆಗಿದ್ದ. ಉತ್ತರ ಭಾರತದ ಅತ್ಯುತ್ತಮ ವಾಸ್ತುರಚನೆಗಳಲ್ಲೊಂದೆನಿಸಿದ ಗ್ವಾಲಿಯರ್ ಅರಮನೆ ಹಾಗೂ ಅದರ ಪೂರ್ವದ್ವಾರವನ್ನು ಈತ ಕಟ್ಟಿಸಿದ. ಈ ಅರಮನೆಯ ಸೌಂದರ್ಯ ಬಾಬರನಂಥ ಕಲಾಭಿಜ್ಞರ ಪ್ರಶಂಸೆಗೆ ಪಾತ್ರವಾಗಿತ್ತು. ಈತನ ಪತ್ನಿ ಮೃಗನಯನಾ ಕೂಡ ಲಲಿತಕಲೆಗಳ ಬೆಳೆವಣಿಗೆಗೆ ವಿಶೇಷ ಪ್ರೋತ್ಸಾಹ ನೀಡಿದಳು. ಭಾರತದ ಸುಪ್ರಸಿದ್ಧ ಸಂಗೀತಗಾರರಿಗೆ ಗ್ವಾಲಿಯರ್ ಪ್ರೀತಿಯ ತಾಣವಾಯಿತು.												 
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ